ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಧುಗಿರಿ ಪೋಲೀಸರು
ಮಧುಗಿರಿ : ಮೂರು ಜನ ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮಧುಗಿರಿ ಪೊಲೀಸರು ಆರೋಪಿಗಳಿಂದ ಸುಮಾರು 10 ಲಕ್ಷ ರೂ ಬೆಲೆಬಾಳುವ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಬೈಪಾಸ್ ಬಳಿಯ ಕೊಡಿಗೇನಹಳ್ಳಿ ಜಂಕ್ಷನ್ ಸಮೀಪ ಪಿಎಸ್ಐ ಮುತ್ತುರಾಜ್ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆಂಧ್ರಪ್ರದೇಶದ ರೊದ್ದಂ ಮಂಡಲA ನ ರೊದ್ಧಕಂಪಲ್ಲಿಯ ನರಸಿಂಹಮೂರ್ತಿ, ಸುರೇಶ್ ಹಾಗೂ ಬೋಯಾ ನರೇಶ್ ಎಂಬುವರನ್ನು ಬಂಧಿಸಿ, ಅವರಿಂದ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪಾವಗಡ, ಗೌರಿಬಿದನೂರು, ಹಿಂದೂಪುರ, ಪೆನಗೊಂಡ, ಭತ್ತಲಪಲ್ಲಿ, ಮಡಕಶಿರಾ ಹಾಗೂ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳುವು ಮಾಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅಬ್ದುಲ್ ಖಾದರ್, ಮರಿಯಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜಿ.ಮಂಜುನಾಥ್ ಉಸ್ತುವಾರಿಯಲ್ಲಿ ಸಿಪಿಐ ಜಿ.ಹನುಮಂತರಾಯಪ್ಪ ನೇತೃತ್ವದಲ್ಲಿ ಪಿಎಸ್ಐಗಳಾದ ಕೆ.ಸಿ.ವಿಜಯಕುಮಾರ್, ಜೆ.ಮುತ್ತುರಾಜ್ ಹಾಗೂ ಸಿಬ್ಬಂದಿಗಳಾದ ಶಿವಣ್ಣ, ಪಾಂಡುನಾಯ್ಕ, ರಂಗರಾಜು, ರಂಜಿತ್ ಕುಮಾರ್, ಪ್ರಕಾಶ್ ಹಾಗೂ ರಮೇಶ್ ಅವರ ತಂಡ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಅವರು ತಂಡವನ್ನು ಶ್ಲಾಘಿಸಿದ್ದಾರೆ.