ಒಂದೇ ಗಂಟೆಯಲ್ಲಿ ಸರಗಳ್ಳರ ಪತ್ತೆ - ಕೊಡಿಗೇನಹಳ್ಳಿ ಪೊಲೀಸರ ಕಾರ್ಯ ಪ್ರವೃತ್ತತೆಗೆ ಸಾರ್ವಜನಿಕರ ಮೆಚ್ಚುಗೆ.
ಮಧುಗಿರಿ : ಜಮೀನಿನಲ್ಲಿ ಹೂವು ಬಿಡಿಸುತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಒಂದೆ ಗಂಟೆಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊಡಿಗೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಪುರವರ ಹೋಬಳಿಯ ಹಳೆತಿಮ್ಮನಹಳ್ಳಿ ಗ್ರಾಮದ ಲಿಖಿತ ಹೆಚ್.ಆರ್. ಎಂಬ ಮಹಿಳೆ ತನ್ನ ಜಮೀನಿನಲ್ಲಿ ಹೂವು ಬಿಡಿಸುತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಲಿಖಿತ ಕೊಡಿಗೇನಹಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಧುಗಿರಿ ಪಟ್ಟಣದ ಗೌರಿಬಿದನೂರು ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಅನುಮಾನಾಸ್ಪದವಾಗಿ ನಡೆದುಕೊಂಡು ಹೋಗುತಿದ್ದ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸರ ಕಳ್ಳತನ ಮಾಡಿರುವುದು ಖಚಿತವಾಗಿದೆ.
ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಶ್ರೀನಿವಾಸ್ ಪ್ರಸಾದ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಗೆ ಹೆಚ್ಚುವರಿ ವರಿಷ್ಠಾಧಿಕಾರಿ ಅಬ್ದುಲ್ ಖಾದರ್, ಡಿವೈಎಸ್ಪಿ ಮಂಜುನಾಥ್, ಸಿಪಿಐ ಹನುಮಂತರಾಯಪ್ಪ, ಭೇಟಿ ನೀಡಿದ್ದು, ಕೇವಲ ಒಂದೇ ಗಂಟೆಯಲ್ಲಿ ಸರಗಳನ್ನು ಪತ್ತೆ ಹಚ್ಚಿದ ಕೊಡಿಗೇನಹಳ್ಳಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.