ತೆಪ್ಪೋತ್ಸವ - ಮತ್ತೆ ಮರುಕಳಿಸಲಿದೆ ಮಧುಗಿರಿಯ ಗತವೈಭವ
ಮಧುಗಿರಿ : ನಾಡಿನ ಶಕ್ತಿ ದೇವತೆ ಶ್ರೀ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಕಾರ್ಯಕ್ರಮವು ಜ.24 ಸಂಜೆ ಚೋಳೆನಹಳ್ಳಿ ಕೆರೆಯಲ್ಲಿ ಅದ್ದೂರಿಯಾಗಿ ಜರುಗಲಿದೆ ಎಂದು ಸಹಕಾರ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಕಸಬಾ ಹೋಬಳಿ ಚೋಳೆನಹಳ್ಳಿ ಕೆರೆಯ ಬಳಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮ ದೇವತೆ ಶ್ರೀ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಲು ರೈತರು ಹಾಗೂ ಭಕ್ತರ ಮನವಿಗೆ ಹಿಂದೆ ಮಾತು ಕೊಟ್ಟಿದ್ದೆ. ಅದರಂತೆ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಸೇವೆ ಮಾಡಿಸುವ ಉದ್ದೇಶದಿಂದ ಹಾಗೂ ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಕೆರೆ ತುಂಬಿ ಸಮೃದ್ದಿಯಾಗಲಿ ಎಂಬ ಸದುದ್ದೇಶದಿಂದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಬರುವ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗದ ಜೊತೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮತ್ತೆ ಮರುಕಳಿಸಲಿದೆ ಮಧುಗಿರಿಯ ಗತವೈಭವ - ರಾಜೇಂದ್ರ ರಾಜಣ್ಣ

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ, ಗ್ರಾಮ ದೇವತೆ ಶ್ರೀ ದಂಡಿನ ಮಾರಮ್ಮನ ತೆಪ್ಪೋತ್ಸವವು ಸುಮಾರು 5 ದಶಕಗಳ ನಂತರ ನಡೆಯುತ್ತಿದ್ದು, ಮಧುಗಿರಿಯ ಗತ ವೈಭವ ಮತ್ತೆ ಮರುಕಳಿಸಲಿದೆ. ಕ್ಷೇತ್ರಕ್ಕೆ ಒಳಿತಾಗುವ ಬಗ್ಗೆ ಹಿರಿಯರು ಸಲಹೆ ನೀಡಿದ ಕಾರಣ ಹಾಗೂ ಸಚಿವರು ಕಳೆದ ವರ್ಷ ಗಂಗಾಪೂಜೆ ಮಾಡುವಾಗ ನೀಡಿದ ಮಾತಿನಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನಿಷ್ಟ 500 ಜನ ಕೂರುವ ವೇದಿಕೆಯನ್ನು ಕರೆಕೋಡಿಯ ಮೇಲೆ ಕೃತಕವಾಗಿ ನಿರ್ಮಾಣ ಮಾಡಲಾಗಿದೆ. ಕೆರೆ ಏರಿಯ ಅಕ್ಕ ಪಕ್ಕದಲ್ಲಿ ಸಾವಿರಾರು ಭಕ್ತರು ನಿಂತು ತೆಪ್ಪೋತ್ಸವ ವೀಕ್ಷಣೆಗೆ ಪ್ರತ್ಯೇಕ ಹಾಗೂ ಸುರಕ್ಷಿತ ಸ್ಥಳ ನಿಗದಿಗೊಳಿಸಿದ್ದೇವೆ. ತೆಪ್ಪೋತ್ಸವ ನಡೆಸಲು ನೂರಾರು ಡ್ರಮ್‌ಗಳ ಕೃತಕ ದೋಣಿಯನ್ನು ತಯಾರಿಸಿದ್ದು, 500 ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳುನ್ನು ನಿಯೋಜಿಸಲಾಗಿದ್ದ, ಮೀನುಗಾರರ ತಂಡ ಕೂಡ ತೆಪ್ಪದ ಸುತ್ತಲೂ ರಕ್ಷಣೆಗಾಗಿ ಕಾವಲಿರಲಿದ್ದು, ನಿರ್ಭಯವಾಗಿ ತೆಪ್ಪೋತ್ಸವ ಕಾರ್ಯ ವೀಕ್ಷಿಸಬಹುದು ಎಂದರು.
ಮೈಸೂರು ದಸರಾ ಹಾಗೂ ಹಾಸನ ಹಾಸನಾಂಬ ದೇವರ ಕಾರ್ಯಕ್ರಮದಲ್ಲಿ ಇರುವಂತೆ ಇಡೀ ಮಧುಗಿರಿ ಪಟ್ಟಣಕ್ಕೆ ದೀಪಾಲಂಕಾರ ಮಾಡಲಾಗಿದ್ದು, ಕೆರೆ ಬಳಿಯೂ ಬೃಹತ್ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ತೆಪ್ಪೋತ್ಸವ ನಡೆಯುವ ಮುಂಚೆ ಬೆಳಿಗ್ಗೆ 11 ಗಂಟೆಗೆ ಬೆಳ್ಳಿ ರಥದಲ್ಲಿ ದೇವಿಯ ಮೆರೆವಣಿಗೆ ಮೂಲಕ ಕೆರೆ ಬಳಿಗೆ ತರಲಾಗುತ್ತದೆ. ಸಂಜೆ 6 ಗಂಟೆಯಿAದ ಆರಂಭವಾಗುವ ಧಾರ್ಮಿಕ ಕಾರ್ಯಗಳಲ್ಲಿ ವಿಶಿಷ್ಟವಾಗಿ ಕಾಶಿಯಿಂದ ಬರುವ ಪುರೋಹಿತರು 45 ನಿಮಿಷಗಳ ಕಾಲ ಗಂಗಾರತಿಯನ್ನು ಮಾಡಲಿದ್ದಾರೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ನಮ್ಮ ಧರ್ಮ, ಪರಂಪರೆ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ ಅವರು, ದಂಡಿನ ಮಾರಮ್ಮ ದೇಗುಲದ ಬಳಿ ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಸ್ಕಿçÃನ್ ಅಳವಡಿ ನೇರಪ್ರಸಾರ ಆಯೋಜಿಸಲಾಗಿದ್ದು, ಸುಮಾರು 15 ಸಾವಿರ ಭಕ್ತರಿಗೆ ಅನ್ನ ಪ್ರಸಾದ ಹಾಗೂ ಸಂಜೆ 10 ಸಾವಿರದಷ್ಟು ಲಾಡು ವಿತರಿಸಲಾಗುತ್ತದೆ ಎಂದರು.
ತೇಲುವ ವೇದಿಕೆ (ಫ್ಲೋಟಿಂಗ್ ಸ್ಟೇಜ್)

ಕೆರೆಯಲ್ಲಿ ತೆಪ್ಪೋತ್ಸವ ನಂತರ ತೇಲುವ ವೇದಿಕೆ ಫ್ಲೋಟಿಂಗ್ ಸ್ಟೇಜ್ ತೆಪ್ಪದಲ್ಲೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ತಡರಾತ್ರಿಯವರೆಗೂ ದೇವತಾ ಕಾರ್ಯಗಳು ನಡೆಯುತ್ತವೆ. ಈ ಕಾರ್ಯಕ್ರಮದಲ್ಲಿ ಚಂಡೆ ವಾದ್ಯ, ಹನುಮಾನ್ ವೇಷಧಾರಿಗಳು ಸೇರಿದಂತೆ 8 ಕಲಾತಂಡಗಳು ನೃತ್ಯರೂಪಕ ನಡೆಸಲಾಗುತ್ತದೆ. ರಾಜ್ಯದಲ್ಲೇ ಕೆರೆಯಲ್ಲಿ ಬೃಹತ್ ತೆಪ್ಪೋತ್ಸವ, ಗಂಗಾರತಿ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಲು ನಮ್ಮ ತಂಡದ ಸ್ನೇಹಿತರು, ಅಧಿಕಾರಿಗಳು ಜೊತೆಯಾಗಿದ್ದು ಎಲ್ಲರ ಸಹಕಾರ ಕೋರಿದರು.
ಕಾರ್ಯಕ್ರಮಕ್ಕೆ ಭಾಗವಹಿಸುವ ಗಣ್ಯರು
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಪೂಜ್ಯರಾದ ಶ್ರೀ ಸಿದ್ದಲಿಂಗಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ವೆಂಕಟರಮಣಪ್ಪ, ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಮುಖಂಡರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಲಿದ್ದು, 4 ಡಿವೈಎಸ್‌ಪಿ, 6 ಸಿಪಿಐ, 18 ಪಿಎಸ್‌ಐ, 38 ಎಎಸ್‌ಐ, 320 ಪೇದೆಗಳು ಸೇರಿ ಸುಮಾರು 500 ಜನರನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷರಾದ ನಂಜುAಡಯ್ಯ, ಎನ್.ಗಂಗಣ್ಣ, ತಿಮ್ಮರಾಜು, ಡಿವೈಎಸ್ಪಿ ಮಂಜುನಾಥ್, ಪಿಎಸೈ ವಿಜಯಕುಮಾರ್, ಇಂಜಿನಿಯರ್ ಮಂಜುಕಿರಣ್, ಮುಖಂಡರಾದ ತುಂಗೋಟಿ ರಾಮಣ್ಣ, ನಾರಾಯಣಪ್ಪ, ಕಾರಮರಡಿ ಮಹೇಶ್, ಹಾಗೂ ತೆಪ್ಪೋತ್ಸವ ವೇದಿಕೆಯ ಸಮಿತಿ ಸದಸ್ಯರು ಜೊತೆಗಿದ್ದರು.