ದೊಡ್ಡೇರಿ ಹೋಬಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ
ಮಧುಗಿರಿ : ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಗೇಟ್‌ನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಂಚಿ ಪ್ರತಿಷ್ಠಾನ ವತಿಯಿಂದ ಕಂಬದ ರಂಗಪ್ಪ ಮತ್ತು ಚಿಕ್ಕತಾಯಮ್ಮ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನೆರೆವೇರಿತು.
ಬೆಂಗಳೂರಿನ ಕ್ರಿಯೇಟಿವ್ ಅಸೋಸಿಯೇಷನ್ ಅವರ ಸಹಭಾಗೀತ್ವದಲ್ಲಿ ನಡೆದ ಈ ಶಿಬಿರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಎಂ.ಎಸ್. ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ವಾಸನ್ ಐ ಕೇರ್, ಆರ್.ಆರ್. ಕಾಲೇಜ್ ಆಫ್ ಫಾರ್ಮಸಿ ಹಾಗೂ ದಯಾನಂದ ಸಾಗರ್ ದಂತ ವೈದ್ಯಕೀಯ ಕಾಲೇಜುಗಳ ತಜ್ಞ ವೈದ್ಯರ ತಂಡ ಭಾಗವಹಿಸಿದ್ದರು.
ಶಿಬಿರದ ಆಯೋಜಕರಾದ ಡಾ. ಎಚ್.ಕೆ. ರಾಮರಾಜು ಮಾತನಾಡಿ ಹಿಂದುಳಿದ ಪ್ರದೇಶ ವಾದ ನಮ್ಮ ತಾಲೂಕಿನ ಗ್ರಾಮೀಣ ಜನರಿಗೆ ಅನುಕೂಲವಗಬೇಕೆಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಟ್ಟು 1200ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡು, ಅವರಲ್ಲಿ 479 ಜನರಿಗೆ ಕಣ್ಣಿನ ಪರೀಕ್ಷೆ ನಡೆಸಲಾಯಿತು. 18 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಗುರುತಿಸಲಾಗಿದ್ದು, 6 ಜನ ಹೃದ್ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಯುಗಾದಿಯ ನಂತರ ಬೆಂಗಳೂರಿನ ಮೇಲ್ಕಂಡ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಿ, ನಂತರ ಅವರನ್ನು ಸುರಕ್ಷಿತವಾಗಿ ಊರಿಗೆ ಮರಳಿಸಲಾಗುವುದು ಎಂದ ಅವರು, ಪ್ರಸ್ತುತ ಅಗತ್ಯವಿದ್ದವರಿಗೆ ಮಾತ್ರೆಗಳು ಮತ್ತು ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ನಟರಾಜ ರಂಗಸ್ವಾಮಿ ಮಾತನಾಡಿ, ಈ ಆರೋಗ್ಯ ಶಿಬಿರದಲ್ಲಿ ಅವಕಾಶವಂಚಿತ ಜನರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಿರುವುದು ಅತ್ಯಂತ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಜನರಿಗೆ ಆರೋಗ್ಯದ ಅರಿವು ಮೂಡಿಸಿ ನೆರವಾಗಲಿ ಎಂದು ಪ್ರಶಂಸಿಸಿದರು.
ಶಿಬಿರದಲ್ಲಿ ಕ್ರಿಯೇಟಿವ್ ಅಸೋಸಿಯೇಷನ್ ಸಂಸ್ಥೆಯ ರವಿರಾಜೆ ಅರಸ್ ಟಿ.ಎಂ., ಶಿವನಂಜಯ್ಯ, ಸಂದೇಶ್ ಆರ್. ಶೆಟ್ಟಿ, ಪುಟ್ಟಸ್ವಾಮಿ ಜೆ. ವೈದ್ಯರಾದ ಡಾ. ನವೀನ್ , ಡಾ. ರೇಣುಕಾದೇವಿ, ಡಾ. ವಿಶ್ವನಾಥ್, ಡಾ. ವಿನೋದ್, ಡಾ. ನಯನಾ, ಗ್ರಾಮದ ಮುಖಂಡರುಗಳಾದ ದಾಸೇಗೌಡ, ಲಕ್ಷ್ಮೀನಾರಾಯಣ, ರಂಗನಾಥ, ಕವಿರಾಜ, ಶಿವಕುಮಾರ್, ದೇವರಾಜು, ಹನುಮಂತು, ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.