ಮಧುಗಿರಿ ಬಿಜೆಪಿ ಮಂಡಲಾಧ್ಯಕ್ಷರ ಆಯ್ಕೆ - ಅಸಮಾಧಾನ ಸ್ಪೋಟ

ಮಧುಗಿರಿ ಬಿಜೆಪಿ ಮಂಡಲಾಧ್ಯಕ್ಷರ ಆಯ್ಕೆ - ಅಸಮಾಧಾನ ಸ್ಪೋಟ

ಮಧುಗಿರಿ : ತಾಲೂಕು ಮಂಡಲಾಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು, ನಿಯಮ ಉಲ್ಲಂಘಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ ಎಂದು ತಾಲೂಕು ಬಿಜೆಪಿಯ ಹಲವು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗಿಯಾದ ಹಲವು ಪದಾಧಿಕಾರಿಗಳು ನೂತನ ಅಧ್ಯಕ್ಷ ಹನುಮಂತರೆಡ್ಡಿಯ ಆಯ್ಕೆಯನ್ನು ತಡೆಹಿಡಿಯುವಂತೆ ಹಾಗೂ ಮಧುಗಿರಿಯ ಮಂಡಲದ ಪದಾಧಿಕಾರಿಗಳ ಆಯ್ಕೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರು ಮಧ್ಯ ಪ್ರವೇಶಿಸಿ ದುಡಿದ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು..

ಇದೇ ವೇಳೇ ಮಾತನಾಡಿದ ಬಗರ್ ಹುಕುಂ ಕಮಿಟಿಯ ಮಾಜಿ ಸದಸ್ಯ ಪ್ರಸನ್ನಕುಮಾರ್ ಈ ಮಂಡಲಾಧ್ಯಕ್ಷರ ಆಯ್ಕೆ ಅಸಿಂಧುವಾಗಿದೆ. ಹಲವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರೂ ಜಿಲ್ಲಾಧ್ಯಕ್ಷರು ಸಮಿತಿಯ ಮುಂದಿಡದೆ ಏಕಪಕ್ಷೀಯವಾಗಿ ಆಯ್ಕೆಮಾಡಿದ್ದಾರೆ. ಇದನ್ನು ನಾವೆಲ್ಲ ಖಂಡಿಸುತ್ತಿದ್ದು, ೨೦ ವರ್ಷದಿಂದ ಪಕ್ಷಕ್ಕಾಗಿ ದುಡಿದ ಹಲವಾರು ಕಾರ್ಯಕರ್ತರನ್ನು ಪರಿಗಣಿಸದೆ ಅನ್ಯಾಯ ಮಾಡಲಾಗಿದೆ. ಮಂಡಲದ ಉಸ್ತುವಾರಿ ಪೂರ್ಣಿಮಾ ಪ್ರಕಾಶ್ ರವರಿಗೂ ಈ ಬಗ್ಗೆ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ಆಯ್ಕೆಯನ್ನು ತಡೆಯದಿದ್ದರೆ ನಾವೆಲ್ಲ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಕಾರ್ಯಕರ್ತರಾಗಿ ಉಳಿಯುತ್ತೇವೆ ಎಂದರು.

ಕೊಡಿಗೇನಹಳ್ಳಿ ಹೋಬಳಿ ಬಿಜೆಪಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಿದರೂ ಸರಿ. ಆದರೆ ರಾಜ್ಯಾದ್ಯಂತ ಪಕ್ಷದ ಸಂಘಟನೆಗಾಗಿ ಓಡಾಡಿದ ಹಾಗೂ ಪಕ್ಷಕ್ಕಾಗಿ ದುಡಿಯುವವರನ್ನು ಆರಿಸುವ ಕೆಲಸವನ್ನು ಜಿಲ್ಲಾಧ್ಯಕ್ಷರು ಮಾಡಿಲ್ಲ. ಸಂಘಟನೆ ಹಾಗೂ ಪಕ್ಷದ ಸಿದ್ದಾಂತದ ಬಗ್ಗೆ ಗೊತ್ತಿಲ್ಲದ ವ್ಯಕ್ತಿಯನ್ನು ಮಂಡಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಅದನ್ನು ಬದಲಾಯಿಸಿ ಕಾರ್ಯಕರ್ತರ ಸಮ್ಮುಖದಲ್ಲಿ ಆಯ್ಕೆ ಮಾಡುವಂತೆ ಆಗ್ರಹಿಸಿದರು.

ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮಣ್ಣ ಮಾತನಾಡಿ ಜಿಲ್ಲಾಧ್ಯಕ್ಷ ಹನುಮಂತೇಗೌಡರು ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಿ ಹೊಸದಾಗಿ ಬಂದವರನ್ನು ಆಯ್ಕೆ ಮಾಡಿದರೆ ಪಕ್ಷ ಸಂಘಟನೆ ಹೇಗೆ ಮಾಡುವುದು. ಆಯ್ಕೆಯಲ್ಲಿ  ಬೂತ್ ಮಟ್ಟದ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದು, ಈ ಆಯ್ಕೆಯನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದರು.

ಮಡಲದ ಮಾಜಿ ಮಹಿಳಾಧ್ಯಕ್ಷೆ ರತ್ನಮ್ಮ ಮಾತನಾಡಿ ಇಡೀ ಜಿಲ್ಲೆಯಲ್ಲಿ ಎಲ್ಲೂ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಉಸ್ತುವಾರಿ ಪೂರ್ಣಿಮಾ ಪ್ರಕಾಶ್ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ಈ ಆಯ್ಕೆಯನ್ನು ತಡೆಹಿಡಿಯಬೇಕು. ಕನಿಷ್ಟ ೩ ವರ್ಷ ದುಡಿದ ೪೫ ವರ್ಷದೊಳಗಿನ ಕಾರ್ಯಕರ್ತರಿಗೆ ಮಂಡಲಾಧ್ಯಕ್ಷ ಸ್ಥಾನ ನೀಡಬೇಕಿದ್ದು, ಜಿಲ್ಲಾಧ್ಯಕ್ಷರು ಪಕ್ಷದ ಕಾನೂನು ಉಲ್ಲಂಘಿಸಿ ಆಯ್ಕೆ ಮಾಡಿರುವುದನ್ನು ನಾವು ಒಪ್ಪುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಕಾರ್ಯದರ್ಶಿ ಸೀತಾರಾಂ, ಐಡಿಹಳ್ಳಿ ಹೋಬಳಿ ಅಧ್ಯಕ್ಷ ಶಂಕರ್, ಎಸ್ಟಿ ಮೋರ್ಚ ಕಾರ್ಯದರ್ಶಿ ವಿವೇಕಾನಂದ, ಮಹಾಶಕ್ತಿ ಕೇಂದ್ರದ ಮಂಡಲ ಕಾರ್ಯದರ್ಶಿ ಶಿವಕುಮಾರ್, ಬಾಲಾಜಿ, ರಂಗನಾಥ್ ಹಾಗೂ ಇತರರಿದ್ದರು.