ಯುವಶಕ್ತಿ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಲಿ : ಶಾಸಕ ಕೆ.ಎನ್.ರಾಜಣ್ಣ
ಮಧುಗಿರಿ : ಪ್ರಪಂಚದಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತವಾಗಿದ್ದು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಮಧುಗಿರಿ ಪಟ್ಟಣದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಶೇ.61ರಷ್ಟಿದ್ದು, ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಸರ್ಕಾರಿ ಉದ್ಯೋಗವನ್ನೇ ಅವಲಂಬಿಸುವ ಪ್ರವೃತ್ತಿ ಕಂಡುಬರುತ್ತಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗಳ ಸಂಖ್ಯೆ ಸೀಮಿತವಾಗಿದೆ. ಆದ್ದರಿಂದ ಯುವಕರು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕುರಿತು ವಿಶೇಷ ಉಪನ್ಯಾಸಗಳು ನಡೆಯಬೇಕು. ಇತಿಹಾಸವನ್ನು ತಿಳಿದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಅನೇಕ ಮಹನೀಯರು ತ್ಯಾಗ, ಬಲಿದಾನ ಹಾಗೂ ಹೋರಾಟದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೆ ನಶೆಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ, ಮಾರ್ಗದರ್ಶನ ಮತ್ತು ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, 2047ರ ವೇಳೆಗೆ ಯುವಶಕ್ತಿಯ ಮೂಲಕ ವಿಕಸಿತ ಭಾರತ ನಿರ್ಮಿಸುವುದು ದೇಶದ ಕನಸಾಗಿದೆ ಎಂದರು.
ಭಾರತದಲ್ಲಿ 37 ಕೋಟಿಗೂ ಅಧಿಕ ಯುವಕರಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಕರು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯುವಕರನ್ನು ಸಂವೇದನಾಶೀಲ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಮೂಲಕ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದರು.
ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಿ, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದು, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿಸುವ ಮೂಲಕ ಯುವಕರ ಸಾಮರ್ಥ್ಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಂದಿನಿ, ಡಿಡಿಪಿಐ ಮಾಧವರೆಡ್ಡಿ, ಡಿವೈಎಸ್ಪಿ ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಉತ್ತಮ್, ಸಹಾಯಕ ನಿರ್ದೇಶಕ ಧನಂಜಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ, ಮಹಮ್ಮದ್ ಆಯುಬ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ಹನುಮಂತಪ್ಪ, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಹನುಮಂತರಾವ್, ಎಇಇ ಸಂಪತ್ ಕುಮಾರ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಹಿಂದುಳಿದ ವರ್ಗಗಳ ಇಲಾಖೆಯ ಜಯರಾಮಯ್ಯ, ಸಿಡಿಪಿಒ ಕುಮಾರ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಸಹನಾ ನಾಗೇಶ್, ಎಸಿಎಫ್ ಉಮಾ, ಕೃಷಿಕ ಸಮಾಜದ ಅಧ್ಯಕ್ಷ ರಮೇಶ್, ಆರಕ್ಷಕ ವೃತ್ತ ನಿರೀಕ್ಷಕ ಹನುಮಂತರಾಯಪ್ಪ, ಪಿಎಸ್ಐ ಎಂ.ಎಸ್. ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ದೇಶಭಕ್ತಿ ಮೂಡಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.