ಹಣ ದುರುಪಯೋಗ - ಎಸ್ ಡಿ ಎ ಅಮಾನತ್ತು

ಹಣ ದುರುಪಯೋಗ - ಎಸ್ ಡಿ ಎ ಅಮಾನತ್ತು

ಮಧುಗಿರಿ : ತಾ.ಪಂ  ದ್ವಿತೀಯ ದರ್ಜೆ ಸಹಾಯಕಿಯೊಬ್ಬರನ್ನು ಬರೋಬರಿ 4.28 ಕೋಟಿ ರೂ ಗಳ ಹಣದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ.

ಮಧುಗಿರಿ ತಾ.ಪಂ ನಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಸೌಮ್ಯ  ಒಟ್ಟು 4,24,06,997 ರೂಗಳ ಹಣ ದುರುಪಯೋಗ ಆರೋಪದಡಿ ಅಮಾನತ್ತುಗೊಂಡವರು. ತಾಲೂಕು  ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹಾಗೂ ಸ್ವಯಂ ನಿವೃತ್ತಿ ಹೊಂದಿದ/ಮರಣ ಹೊಂದಿದ ಸರ್ಕಾರಿ ನೌಕರರ ಅಂತಿಮ ಗಳಿಕೆ ರಜೆಯನ್ನು ನಗಧೀಕರಣ ಮಂಜೂರಾತಿ ಮಾಡುವಲ್ಲಿ ಅಕ್ರಮವಾಗಿರುವ ಸಂಬಂಧ ಈ ಬಗ್ಗೆ ಹಲವಾರು ಬಾರಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದ್ದು, ಖಜಾನೆ-2ರಲ್ಲಿ ನೌಕರರ ರೆಸಿಪಿಯಂಟ್ ಐ.ಡಿಯಲ್ಲಿನ ನೌಕರರ ಹೆಸರಿಗೂ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿಗೂ ವ್ಯತ್ಯಾಸವಿದ್ದು, ಹಣದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ  ಜಿಲ್ಲಾ ಪಂಚಾಯತ್‌ ನಿಂದ ತನಿಖೆ ನಡೆಸಿದ್ದು, ತನಿಖಾ ತಂಡದವರು ವರದಿ ತನಿಖೆ ನಡೆಸಿ ರೂ.4,24,06,997/-ಗಳ ಹಣದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸೌಮ್ಯ  ರವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಾಗೂ ಇವರ ಸೇವೆಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜ ಆದೇಶ ಹೊರಡಿಸಿದ್ದಾರೆ.

ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಿದೆ. ಹಾಗೂ ಸೇವೆಯನ್ನು ಮಾತೃ ಇಲಾಖೆಗೆ ಹಿಂದುಗಿಸಿದೆ. ಅಮಾನತ್ತಿನ ಅವಧಿಯಲ್ಲಿ ಸದರಿ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ಸದರಿ ನೌಕರರು ಸಕ್ಷಮ ಪ್ರಾಧಿಕಾರಿ ರವರ ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.