ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ ತೋರಿದರೆ ಕಟ್ಟುನಿಟ್ಟಿನ ಕ್ರಮ - ಎಸ್ಪಿ ಕೆ.ವಿ.ಅಶೋಕ್ ಎಚ್ಚರಿಕೆ
ತುಮಕೂರು : ಹೊಸ ವರ್ಷಾಚರಣೆ ಕುರಿತಂತೆ ತುಮಕೂರು ಎಸ್ ಪಿ ಕೆ.ವಿ.ಅಶೋಕ್ ಜಿಲ್ಲೆಯ ಜನತೆಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಹೊಸ ವರ್ಷಾಚರಣೆಯನ್ನು ಹೊಣೆಯರಿತು ಜವಾಬ್ದಾರಿಯಿಂದ ಆಚರಿಸಿ, ಮತ್ತೇರಿಸಿ ಮೈ ಮರೆಯುವ ರೀತಿಯಲ್ಲಿ ಅತಿ ಮದ್ಯ ಅಥವಾ ಮಾದಕ ಪದಾರ್ಥಗಳನ್ನು ಸೇವಿಸಿ ಹೆದ್ದಾರಿಗಳಲ್ಲಿ ವೇಗವಾಗಿ ವಾಹನ ಚಲಾವಣೆ ಮಾಡುವುದು, ವೀಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಪರವಾನಗಿ ಇಲ್ಲದ ಸ್ಥಳಗಳಲ್ಲಿ ಹಾಗೂ ಫಾರಂ ಹೌಸ್ಗಳಲ್ಲಿ ಹೊಸ ವರ್ಷಾಚರಣೆ ಪಾರ್ಟಿಗಳನ್ನು ಮಾಡುವಂತಿಲ್ಲ, ಒಂದು ವೇಳೆ ಪೊಲೀಸ್ ಗಮನಕ್ಕೆ ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ನಡು ರಾತ್ರಿ 12 ಗಂಟೆಯಲ್ಲಿ ಪರಿಚಿತರು, ಗೆಳೆಯರ ಹೊರತು ಪಡಿಸಿ ಹಾದಿಯಲ್ಲಿ ಎದುರಾಗುವ ಅಥವಾ ಪಾರ್ಟಿಯಲ್ಲಿರುವ ಜನರೊಂದಿಗೆ ಅದರಲ್ಲೂ ವಿಶೇಷವಾಗಿ ಅಪ್ರಾಪ್ತರೊಂದಿಗೆ ಹಾಗೂ ಹೆಣ್ಣುಮಕ್ಕಳನ್ನು ವಿಷ್ ಮಾಡುವ ನೆಪದಲ್ಲಿ ಅಸಭ್ಯವಾಗಿ ವರ್ತಿಸುವಂತಿಲ್ಲ ಎಂದು ಎಸ್ ಪಿ ಎಚ್ಚರಿಕೆ ನೀಡಿದ್ದಾರೆ.