ಮಧುಗಿರಿ ಕಾರ್ಡಿಯಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ  ಫುಡ್ ಫೆಸ್ಟ್(ಶಾಪಿ ಡೇ) ಕಾರ್ಯಕ್ರಮ

ಮಧುಗಿರಿ ಕಾರ್ಡಿಯಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಫುಡ್ ಫೆಸ್ಟ್(ಶಾಪಿ ಡೇ) ಕಾರ್ಯಕ್ರಮ

ಮಧುಗಿರಿ - ಪಟ್ಟಣದ ಹೊರವಲಯದಲ್ಲಿರುವ ಕಾರ್ಡಿಯಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ  ಫುಡ್ ಫೆಸ್ಟ್(ಶಾಪಿ ಡೇ) ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ತಾವೇ ತಯಾರಿಸಿದ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಿ ಖುಷಿ ಪಡುವುದರ ಜೊತೆಯಲ್ಲಿ ಹಣಗಳಿಸಿ ವ್ಯವಹಾರ ಜ್ಞಾನದ ಬಗ್ಗೆ ಅರಿವು ಪಡೆದುಕೊಂಡರು.

ದಿನನಿತ್ಯ ಪಠ್ಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಮಕ್ಕಳಿಗೆ ಸ್ವಲ್ಪ ಬದಲಾವಣೆ ಇರಲಿ ಎಂಬ ಸದುದ್ದೇಶದಿಂದ ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಗುರುಮಠ್ ಅವರು ಫುಡ್ ಫೆಸ್ಟ್(ಶಾಪಿ ಡೇ)ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಸಹ ಭಾಗವಹಿಸುವಂತೆ ಮಾಡಿ ಮಕ್ಕಳಿಗೆ ವ್ಯವಹಾರ ಜ್ಞಾನದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. 

ಚುರುಮುರಿ, ಪಾನಿಪುರಿ, ಪನ್ನೀರ್ ಮಸಾಲಾ, ಸೋಡಾ, ಮಿಲ್ಕ್ ಶೇಕ್, ನೂಡಲ್ಸ್, ಚಿಪ್ಸ್ ಮಸಾಲಾ, ಜ್ಯೂಸ್‌ಗಳ ಜೊತೆಯಲ್ಲಿ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾಡಿಕೊಂಡು ಬಂದಿದ್ದ ಮಕ್ಕಳು ಅವುಗಳನ್ನು ಮಾರಾಟ ಮಾಡಿ ಹಣಗಳಿಸಿ ವ್ಯವಹಾರ ಜ್ಞಾನದ ಅನುಭವ ಪಡೆದುಕೊಂಡರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಖಜಾಂಚಿ ಶೈಲಶ್ರಿ ಮಾತನಾಡಿ, ಮೊಟ್ಟಮೊದಲ ಬಾರಿಗೆ ಶಾಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಕ್ಕಳು ಖುಷಿ-ಖುಷಿಯಿಂದ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಅವರಿಗೆ ಲಾಭ-ನಷ್ಟದ ಜೊತೆಗೆ ಆರ್ಥಿಕ ಜ್ಞಾನದ ಅನುಭವ ಸಿಗಲಿದೆ ಎಂದರು. 

ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಗುರುಮಠ್ ಮಾತನಾಡಿ, ಕಾರ್ಡಿಯಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಫುಡ್ ಫೆಸ್ಟ್(ಶಾಪಿ ಡೇ) ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಲ್ಲಿ ವ್ಯವಹಾರ ಜ್ಞಾನದ ಮೂಲ ತಿಳಿಸುವುದು ಹಾಗೂ ಸಂವಹನ ಕೌಶಲ್ಯ ಬೆಳೆಸುವುದಾಗಿದೆ ಎಂದ ಅವರು, ಕಾರ್ಯಕ್ರಮಕ್ಕೆ ಎಲ್ಲಾ ಪೋಷಕರು ಉತ್ಸುಕತೆಯಿಂದ ತಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಿದ್ದಾರೆ. ಅವರಿಗೆ ನಮ್ಮ ಶಾಲೆಯ ವತಿಯಿಂದ ಧನ್ಯವಾದ ಅರ್ಪಿಸಲಾಗುವುದು ಎಂದರು. 

ಪೋಷಕರುಗಳಾದ ಶಶಿಧರ್ ಹಾಗೂ ಪಂಕಜ ಮಾತನಾಡಿ, ನಮ್ಮ ಮಕ್ಕಳು ಉತ್ಸಾಹದಿಂದ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿಕೊಂಡು ಬಂದಿದ್ದಾರೆ. ಇಲ್ಲಿ ಮಕ್ಕಳಿಗೆ ಲಾಭ-ನಷ್ಟದ ಬಗ್ಗೆ ತಿಳುವಳಿಕೆ ಸಿಗಲಿದ್ದು, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಾದ ಶಿವಾನಂದ್, ಶ್ರೀನಿವಾಸ್, ವೈಷ್ಣವಿ, ಟೀನಾ, ಉರ್ಜಾ, ಚಂದನ, ಮಂಜುಳ ರಾಜ್, ರಾಜೇಶ್, ಚಂದ್ರಶೇಕರ್, ಹರೀಶ್, ದರ್ಶನ, ವೀಣಾ, ಶಿವರಾಜ್, ಸುರೇಶ್, ಆಡಳಿತ ಮಂಡಳಿಯ ಪ್ರದೀಪ್ ಹಾಗೂ ಮುಂತಾದವರು ಇದ್ದರು.