Live Sunday, October 25, 2026
Font Size:
ಸುದ್ದಿ 1 min read 157 Views
Okt 22, 2026

ಇಂತಹ ಚುನಾವಣೆ ಬೇಕಾ? ಮತದಾರರಿಗೆ ಅಭ್ಯರ್ಥಿಗಳೇ ಪರಿಚಯವಿಲ್ಲ!

ಇಂತಹ ಚುನಾವಣೆ ಬೇಕಾ? ಮತದಾರರಿಗೆ ಅಭ್ಯರ್ಥಿಗಳೇ ಪರಿಚಯವಿಲ್ಲ!
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಅಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ: ಪ್ರಚಾರದ ಕೊರತೆ, ಅಭ್ಯರ್ಥಿಗಳ ಪರಿಚಯವಿಲ್ಲದೆ ಗೊಂದಲದಲ್ಲಿ ಮತದಾರರು!

ಮಧುಗಿರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಶ್ರೇಷ್ಠವಾದ ಹಕ್ಕು. ಆದರೆ, ಮತದಾರರಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪರಿಚಯವೇ ಇಲ್ಲದಿದ್ದರೆ, ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ಅರಿವಿಲ್ಲದಿದ್ದರೆ ಅಂತಹ ಚುನಾವಣೆ ಯಾರಿಗಾಗಿ? ಯಾರಿಗೆ ಪ್ರಯೋಜನ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಅಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯಾರು? ಅವರ ಹಿನ್ನೆಲೆ ಏನು? ಪದವೀಧರರ ಸಮಸ್ಯೆಗಳಿಗೆ ಅವರ ಪರಿಹಾರಗಳೇನು? ಎಂಬ ಮಾಹಿತಿಯೇ ಅನೇಕ ಮತದಾರರಿಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳು ಮತದಾರರನ್ನು ನೇರವಾಗಿ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ವಿವರಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ. ಆದರೆ, ಈ ಬಾರಿ ಅಭ್ಯರ್ಥಿಗಳ ಪರಿಚಯ ಹಾಗೂ ಚುನಾವಣಾ ಪ್ರಚಾರದ ವಿಚಾರದಲ್ಲಿ ನಿರೀಕ್ಷಿತ ಚಟುವಟಿಕೆ ಕಂಡುಬರುತ್ತಿಲ್ಲ ಎಂಬ ಅಸಮಾಧಾನ ಮತದಾರರಿಂದ ಕೇಳಿಬರುತ್ತಿದೆ.

ಜನಪ್ರತಿನಿಧಿಗಳ ಪ್ರಚಾರವೂ ಗೌಣ?

ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಸಕ್ರಿಯವಾಗಿ ಪ್ರಚಾರ ನಡೆಸಬೇಕಿತ್ತು. ಆದರೆ, ಇಲ್ಲಿಯವರೆಗೆ ಅಂತಹ ಪ್ರಚಾರ ಚಟುವಟಿಕೆಗಳು ಗಮನಾರ್ಹವಾಗಿ ಕಂಡುಬಂದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೆಲವೆಡೆ ಫೋಟೋಗಳಿಗೆ ಸೀಮಿತವಾದ ಪ್ರಚಾರವೇ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

ಮತದಾರರ ಮುಂದೆ ದೊಡ್ಡ ಪ್ರಶ್ನೆ!

ಪದವೀಧರರ ಕ್ಷೇತ್ರದ ಚುನಾವಣೆ ಎಂದರೆ ವಿದ್ಯಾವಂತ ಮತದಾರರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮಹತ್ವದ ಪ್ರಕ್ರಿಯೆ. ಪದವೀಧರರ ಉದ್ಯೋಗ, ನಿರುದ್ಯೋಗ, ಶಿಕ್ಷಣ ಹಾಗೂ ವೃತ್ತಿಪರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬಲ್ಲ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಈ ಚುನಾವಣೆಯ ಉದ್ದೇಶವಾಗಬೇಕು.

ಆದರೆ, ಅಭ್ಯರ್ಥಿಗಳ ಪರಿಚಯವೇ ಇಲ್ಲದಿರುವಾಗ, ಅವರ ಸಾಧನೆ ಮತ್ತು ನಿಲುವುಗಳ ಬಗ್ಗೆ ಮಾಹಿತಿ ಲಭ್ಯವಿಲ್ಲದಿರುವಾಗ ಮತದಾರರು ಯಾರನ್ನು ಆಯ್ಕೆ ಮಾಡಬೇಕು? ಕೇವಲ ಪಕ್ಷದ ಹೆಸರಿನ ಆಧಾರದ ಮೇಲೆ ಮತ ಚಲಾಯಿಸಬೇಕೇ? ಅಥವಾ ಅಭ್ಯರ್ಥಿಗಳ ಕಾರ್ಯವೈಖರಿ ತಿಳಿದು ನಿರ್ಧಾರ ಕೈಗೊಳ್ಳಬೇಕೇ? ಎಂಬ ಗೊಂದಲ ಮೂಡಿದೆ.

ಪ್ರಜಾಪ್ರಭುತ್ವದಲ್ಲಿ ಮತದಾನ ಕೇವಲ ಹಕ್ಕಲ್ಲ, ಅದು ಜವಾಬ್ದಾರಿಯೂ ಹೌದು. ಮತದಾರರನ್ನು ಗೌರವಿಸುವುದು, ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅಭ್ಯರ್ಥಿಗಳ ಪರಿಚಯ ಮಾಡಿಸುವುದು ಚುನಾವಣೆಯಲ್ಲಿ ಸ್ಪರ್ಧಿಸುವವರ ಕರ್ತವ್ಯವಾಗಿದೆ.

ಮತದಾರರಿಗೆ ಅಭ್ಯರ್ಥಿಗಳ ಪರಿಚಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೆ, ಈ ಚುನಾವಣೆ ಯಾರಿಗಾಗಿ ನಡೆಯುತ್ತಿದೆ ಎಂಬ ಪ್ರಶ್ನೆಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳೇ ಉತ್ತರಿಸಬೇಕಿದೆ.