Live Sunday, October 25, 2026
Font Size:
ಸುದ್ದಿ 1 min read 715 Views
Okt 11, 2026

ಮೀಸಲಾತಿ ಬೆನ್ನಲ್ಲೇ ಮಧುಗಿರಿಯಲ್ಲಿ ರಾಜಕೀಯ ಸಂಚಲನ; ಟಿಕೆಟ್‌ಗಾಗಿ ತೆರೆಮರೆಯ ಕಸರತ್ತು!

ಮೀಸಲಾತಿ ಬೆನ್ನಲ್ಲೇ ಮಧುಗಿರಿಯಲ್ಲಿ ರಾಜಕೀಯ ಸಂಚಲನ; ಟಿಕೆಟ್‌ಗಾಗಿ ತೆರೆಮರೆಯ ಕಸರತ್ತು!
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪೈಪೋಟಿ; ಜೆಡಿಎಸ್‌ನಲ್ಲಿ ನಾಯಕತ್ವದ ಲೆಕ್ಕಾಚಾರ

ಮಧುಗಿರಿ: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಮಧುಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಐದು ಜಿಲ್ಲಾ ಪಂಚಾಯಿತಿ ಸ್ಥಾನಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಂಭಾವ್ಯ ಆಕಾಂಕ್ಷಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ.

ಮಿಡಿಗೇಶಿ (ಪ.ಜಾ.–ಮಹಿಳೆ): ಕಾಂಗ್ರೆಸ್‌ನಿಂದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ್ ಹಾಗೂ ಮಾಜಿ ಶಾಸಕ ಗಂಗಾಹನುಮಯ್ಯ ಅವರ ಸೊಸೆ ಶೈಲಜಾ ಮಾರುತಿ ಗಂಗಾಹನುಮಯ್ಯ ಅವರ ಹೆಸರುಗಳು ಚರ್ಚೆಯಲ್ಲಿವೆ. ಜೆಡಿಎಸ್‌ನಿಂದ ಎಸ್.ಡಿ. ಕೃಷ್ಣಪ್ಪ ಅವರ ಕುಟುಂಬದ ಹೆಸರು ಕೇಳಿಬರುತ್ತಿದೆ.

ಐ.ಡಿ. ಹಳ್ಳಿ (ಸಾಮಾನ್ಯ): ಕಾಂಗ್ರೆಸ್‌ನಿಂದ ಮಾಜಿ ಶಾಸಕ ಗೋವಿಂದರೆಡ್ಡಿ ಅವರ ಪುತ್ರ ಶ್ರೀಧರ್ ರೆಡ್ಡಿ, ಮಾಜಿ ತಾ.ಪಂ. ಸದಸ್ಯ ಚೀಲನಹಳ್ಳಿ ರಾಜು, ಹಿರಿಯ ಮುಖಂಡ ಶನಿವಾರಂ ರೆಡ್ಡಿ, ಮಾಜಿ ತಾ.ಪಂ. ಸದಸ್ಯ ಶ್ರೀನಿವಾಸ್ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ. ಗೋವಿಂದಪ್ಪ, ಬಂದ್ರೇಹಳ್ಳಿ ನಾಗಾರ್ಜುನ್ ,  ಜೆಡಿಎಸ್ ನಿಂದ ತಾಡಿ ನಾಗಭೂಷಣ್ ಅವರ ಹೆಸರುಗಳು ಚರ್ಚೆಯಲ್ಲಿವೆ.

ಕೊಡಿಗೇನಹಳ್ಳಿ (ಪ.ಪಂ.–ಮಹಿಳೆ): ಕೆ.ಎನ್. ರಾಜಣ್ಣ ಅವರ ಪತ್ನಿ ಶಾಂತಲಾ ರಾಜಣ್ಣ ಹಾಗೂ ಪುತ್ರಿ ರಶ್ಮಿ ಅವರ ಹೆಸರುಗಳು ಪ್ರಬಲವಾಗಿ ಚರ್ಚೆಯಲ್ಲಿವೆ. ಮತ್ತೊಂದೆಡೆ, ಜೆಡಿಎಸ್‌ನಲ್ಲಿ ಅಭ್ಯರ್ಥಿಯ ಆಯ್ಕೆ ಕುತೂಹಲ ಮೂಡಿಸಿದೆ.

ಕಸಬಾ (ಹಿ.ವ.–ಅ): ಕಾಂಗ್ರೆಸ್‌ನಿಂದ ಎಂ.ಎನ್.ಕೆ. ನಂಜುಂಡರಾಜು, ಸಿದ್ಧಾಪುರ ಈರಣ್ಣ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಜೆ. ರಾಜಣ್ಣ ಅವರ ಕುಟುಂಬದ ಹೆಸರುಗಳು ಕೇಳಿಬರುತ್ತಿವೆ. ಜೆಡಿಎಸ್‌ನಿಂದ ಡಿ.ವಿ. ಹಳ್ಳಿ ಮುಖಂಡ ತಿಮ್ಮಣ್ಣ ಅವರ ಪುತ್ರ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭು ಆರ್.ಟಿ. ಅವರ ಹೆಸರು ಚರ್ಚೆಯಲ್ಲಿದೆ.

ದೊಡ್ಡೇರಿ (ಸಾಮಾನ್ಯ–ಮಹಿಳೆ): ಕಾಂಗ್ರೆಸ್‌ನಿಂದ ಹರ್ಷ ಆರ್. ಕುರುಬರಹಳ್ಳಿ ಅವರ ಪತ್ನಿ ಮಾಧುರ್ಯಾ ಹರ್ಷ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಜೆಡಿಎಸ್‌ನಿಂದ ಮಾಜಿ ತಾ.ಪಂ. ಸದಸ್ಯೆ ಕೋಮಲ ದ್ವಾರಕೀಶ್, ಬಾವಿಮನೆ ಕಾಂತರಾಜು ಅವರ ಪತ್ನಿ ಹೇಮಲತಾ, ಬೋರ್‌ವೆಲ್ ಕುಮಾರ್ ಅವರ ಕುಟುಂಬ, ನಾಗಲಕ್ಷ್ಮಿ ದೇವರಾಜ್ (ಹೆಗ್ಗಡೆ) ಹಾಗೂ ಸಿದ್ದರಾಜು ಬಸವನಹಳ್ಳಿ ಅವರ ಕುಟುಂಬದ ಹೆಸರುಗಳು ಚರ್ಚೆಯಲ್ಲಿವೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ; ಜೆಡಿಎಸ್‌ನಲ್ಲಿ ನಾಯಕತ್ವದ ಪ್ರಶ್ನೆ

ಕಾಂಗ್ರೆಸ್‌ನಲ್ಲಿ ಕೆ.ಎನ್. ರಾಜಣ್ಣ ಮತ್ತು ರಾಜೇಂದ್ರ ರಾಜಣ್ಣ ಅವರ ನೇತೃತ್ವದಲ್ಲಿ ಸಂಭಾವ್ಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರ ನಿರ್ಧಾರ ಪ್ರಮುಖವಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.

ಇನ್ನೊಂದೆಡೆ, ಜೆಡಿಎಸ್‌ನಲ್ಲಿ ನಾಯಕತ್ವದ ವಿಚಾರ ಕುತೂಹಲ ಮೂಡಿಸಿದೆ. ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಜೆಡಿಎಸ್‌ನ ತಾಲೂಕು ಮಾಜಿ ಅಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಸದಸ್ಯ ಡಿ.ಆರ್. ಬಸವರಾಜು ಪತ್ರಿಕೆಗೆ ತಿಳಿಸಿದ್ದಾರೆ.

ಅಂತಿಮ ಮೀಸಲಾತಿ ಹಾಗೂ ಪಕ್ಷಗಳ ಟಿಕೆಟ್ ಘೋಷಣೆಯ ಬಳಿಕ ರಾಜಕೀಯ ಚಿತ್ರಣ ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ. ಈಗಾಗಲೇ ಸಂಭಾವ್ಯ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಶಾಸಕ ಹಾಗೂ ಮಾಜಿ ಶಾಸಕರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದು, ಟಿಕೆಟ್ ಪಡೆಯಲು ತೆರೆಮರೆಯ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.