Live Sunday, October 25, 2026
Font Size:
ಸುದ್ದಿ 1 min read 54 Views
Okt 12, 2026

ಕರ್ಕಶ ಹಾರ್ನ್, ಶಬ್ದಮಾಲಿನ್ಯ ಉಂಟುಮಾಡುವ ಸೈಲೆನ್ಸರ್‌ಗಳ ಹಾವಳಿ: ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ

ಕರ್ಕಶ ಹಾರ್ನ್, ಶಬ್ದಮಾಲಿನ್ಯ ಉಂಟುಮಾಡುವ ಸೈಲೆನ್ಸರ್‌ಗಳ ಹಾವಳಿ: ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ: ಕಾಲೇಜುಗಳ ಬಳಿ ಅತಿವೇಗದ ವಾಹನ ಸಂಚಾರ; ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ

ಮಧುಗಿರಿ: ಪಟ್ಟಣದ ರಾಘವೇಂದ್ರ ಕಾಲೋನಿಯ ಗೌತಮ ಬುದ್ಧ ಕಾಲೇಜು ಬಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದ ಡಬಲ್ ರಸ್ತೆಯಲ್ಲಿ ಅತಿವೇಗದ ವಾಹನ ಸಂಚಾರ ಮತ್ತು ಕರ್ಕಶ ಶಬ್ದದ ಹಾರ್ನ್‌ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬೆಳಗ್ಗೆ ಕಾಲೇಜು ಆರಂಭವಾಗುವ ಸಮಯದಲ್ಲಿ ಹಾಗೂ ಸಂಜೆ ಕಾಲೇಜು ಬಿಡುವ ವೇಳೆಯಲ್ಲಿ ಈ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ ಕೆಲ ವಾಹನ ಸವಾರರು ಅತಿವೇಗವಾಗಿ ಸಂಚರಿಸುವುದರ ಜೊತೆಗೆ ಕರ್ಕಶ ಶಬ್ದ ಮಾಡುವ ಹಾರ್ನ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಅಪಘಾತದ ಆತಂಕವೂ ಎದುರಾಗಿದೆ.

ಕೆಲವರು ನಿಯಮಬಾಹಿರ ಹಾಗೂ ಅತಿಯಾದ ಶಬ್ದ ಹೊರಸೂಸುವ ಸೈಲೆನ್ಸರ್‌ಗಳನ್ನು ವಾಹನಗಳಿಗೆ ಅಳವಡಿಸಿಕೊಂಡು ಸಂಚರಿಸುತ್ತಿದ್ದಾರೆ. ಜೋರಾದ ಶಬ್ದದಿಂದ ಶಬ್ದಮಾಲಿನ್ಯ ಹೆಚ್ಚಾಗುತ್ತಿದ್ದು, ಕಾಲೇಜುಗಳ ಸುತ್ತಮುತ್ತಲಿನ ಶೈಕ್ಷಣಿಕ ವಾತಾವರಣಕ್ಕೂ ಧಕ್ಕೆಯಾಗುತ್ತಿದೆ. ವಿದ್ಯಾರ್ಥಿಗಳು ಪಾಠ ಕೇಳಲು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸಲು ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸರು ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ, ವಿಶೇಷ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅತಿವೇಗದ ವಾಹನ ಚಾಲನೆಗೆ ಕಡಿವಾಣ ಹಾಕುವುದರ ಜೊತೆಗೆ ನಿಯಮಬಾಹಿರ ಹಾರ್ನ್‌ಗಳು ಮತ್ತು ಸೈಲೆನ್ಸರ್‌ಗಳನ್ನು ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಂಡು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.