ಕೊಟಗಾರಲಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಕಾವ್ಯಶ್ರೀ ಗೋವಿಂದಯ್ಯ ಅವಿರೋಧ ಆಯ್ಕೆ
ಮಧುಗಿರಿ : ತಾಲೂಕಿನ ಕೊಟಗಾರಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾವ್ಯಶ್ರೀ ಗೋವಿಂದಯ್ಯ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ದೊಡ್ಡೇರಿ ಹೋಬಳಿಯ ಕೊಟಗಾರಲಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷರ ಚುನಾವಣೆ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಕಾವ್ಯಶ್ರೀ ಗೋವಿಂದಯ್ಯ ನಾಮಪತ್ರ ಸಲ್ಲಿಸಿದ್ದು, ಇಂದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿ ಲಕ್ಷ್ಮಣ್ ರವರು ಅಧ್ಯಕ್ಷ ಸ್ಥಾನಕ್ಕೆ ಕಾವ್ಯಶ್ರೀ ಗೋವಿಂದಯ್ಯನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷೆ ಕಾವ್ಯಶ್ರೀ ಗೋವಿಂದಯ್ಯ ಮಾತನಾಡಿ ಗ್ರಾಮ ಪಂಚಾಯಿತಿ ಸದಸ್ಯರು ನನ್ನ ಮೇಲೇ ವಿಶ್ವಾಸವಿಟ್ಟು ಅಧ್ಯಕ್ಷರ ಸ್ಥಾನವನ್ನು ನೀಡಿದ್ದು, ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸರ್ವ ಸದಸ್ಯರ ಸಹಕಾರ ಪಡೆದು ಗ್ರಾಮದಲ್ಲಿ ಕುಡಿಯುವ ನೀರು, ಬೀದಿ ದೀಪ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸಿದ್ದರಾಜಮ್ಮ ಸದಸ್ಯರಾದ ಲಾವಣ್ಯ, ಕಾಂತರಾಜು, ದಯಾನಂದ, ರಾಜಣ್ಣ, ಚಿಕ್ಕಮಣಿ, ವಿಜಯಲಕ್ಷ್ಮಿ, ವೀರನರಸಿಂಹಯ್ಯ, ಗಂಗಾಧರೇಶ್ವರ, ನರಸಿಂಹಯ್ಯ, ಮುಖಂಡರುಗಳಾದ ದೀಪಕ್, ನಾಗೇಂದ್ರ, ಮೆಹಬೂಬ್ ಪಾಷಾ, ಲಿಂಗಣ್ಣನಾಯ್ಕ, ಜಯಲಕ್ಷ್ಮಮ್ಮ,ಗ್ರಾಮೀಣ ಅಭಿವೃದ್ಧಿ ಅಧಿಕಾರಿ ದಯಾನಂದ್ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂಗ್ರಾಮಸ್ಥರು ಮತ್ತಿತರರಿದ್ದರು.