Live Sunday, October 25, 2026
Font Size:
ಶಿಕ್ಷಣ 1 min read 114 Views
Okt 04, 2026

ಪರೀಕ್ಷೆ ಯುದ್ಧವಲ್ಲ, ಸಾಮರ್ಥ್ಯ ಪ್ರದರ್ಶಿಸುವ ಅವಕಾಶ: ಡಾ. ಸುಧೀರ್ ಪೈ

ಪರೀಕ್ಷೆ ಯುದ್ಧವಲ್ಲ, ಸಾಮರ್ಥ್ಯ ಪ್ರದರ್ಶಿಸುವ ಅವಕಾಶ: ಡಾ. ಸುಧೀರ್ ಪೈ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮೇಳ

ಮಧುಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತಿಕೆಯ ಅಧ್ಯಯನ, ಸಮಯ ನಿರ್ವಹಣೆ ಹಾಗೂ ಸರಿಯಾದ ಅಧ್ಯಯನ ಯೋಜನೆ ಅಳವಡಿಸಿಕೊಳ್ಳಬೇಕು ಎಂದು ಕಾರ್ಡಿಯಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಸುಧೀರ್ ಪೈ ಹೇಳಿದರು.

ಮಧುಗಿರಿಯ ಗುಡಿರೊಪ್ಪದಲ್ಲಿರುವ ಕಾರ್ಡಿಯಲ್ ಆವರಣದ ಎಸ್‌ಎಸ್‌ವಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿ, ಏಕಾಗ್ರತೆ ಮತ್ತು ಎಚ್ಚರಿಕೆಯಿಂದ ಶಿಸ್ತುಬದ್ಧ ಜೀವನ ನಡೆಸಬೇಕು. ಕೇವಲ ಹೆಚ್ಚು ಸಮಯ ಓದುವುದಕ್ಕಿಂತ ವಿಷಯವನ್ನು ಅರ್ಥಮಾಡಿಕೊಂಡು, ಸಮಯವನ್ನು ಸಮರ್ಪಕವಾಗಿ ಯೋಜಿಸಿಕೊಂಡು ಅಧ್ಯಯನ ಮಾಡುವುದು ಮುಖ್ಯ. ಕಠಿಣ ಪರಿಶ್ರಮದೊಂದಿಗೆ ಬುದ್ಧಿವಂತಿಕೆಯ ಅಧ್ಯಯನ ವಿಧಾನ ಅಳವಡಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.

10ನೇ ತರಗತಿಯ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸೂಕ್ತ ಶಿಕ್ಷಣ ಹಾಗೂ ವೃತ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ವೈದ್ಯಕೀಯ, ಔಷಧ ವಿಜ್ಞಾನ, ಅರೆವೈದ್ಯಕೀಯ, ದೈಹಿಕ ಚಿಕಿತ್ಸಾ ವಿಜ್ಞಾನ, ಪ್ರಯೋಗಾಲಯ ವಿಜ್ಞಾನ, ಅಭಿಯಾಂತ್ರಿಕ, ಗಣಕ ತಂತ್ರಾಂಶ, ಯಾಂತ್ರಿಕ, ವಿದ್ಯುತ್, ತಾಂತ್ರಿಕ ಶಿಕ್ಷಣ, ಗಣಕ ಯಂತ್ರಾಂಶ, ಮಾನವರಹಿತ ವಿಮಾನ ಹಾಗೂ ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ಅವಕಾಶಗಳಿವೆ ಎಂದು ವಿವರಿಸಿದರು.

“ಪರೀಕ್ಷೆ ಎನ್ನುವುದು ಯುದ್ಧವಲ್ಲ; ನಿಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ದೊರೆಯುವ ಅವಕಾಶ” ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಅವರು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿ ಹಾಕಿಕೊಂಡು ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನಹರಿಸಬೇಕು. ಪೋಷಕರು ಮತ್ತು ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆಯ ಅಂಕಗಳು ಮಾತ್ರ ಜೀವನದ ಅಂತಿಮ ಮಾನದಂಡವಲ್ಲ. ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವ, ಶಿಸ್ತು, ಜ್ಞಾನ, ಕೌಶಲ್ಯ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ. ಬಡತನದಲ್ಲಿ ಜನಿಸುವುದು ವ್ಯಕ್ತಿಯ ತಪ್ಪಲ್ಲ; ಆದರೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದೆ ಜೀವನದಲ್ಲಿ ಮುಂದುವರಿಯದಿರುವುದು ನಮ್ಮ ತಪ್ಪಾಗಬಹುದು ಎಂದು ಕಿವಿಮಾತು ಹೇಳಿದರು.

ಕಾಲೇಜಿನ  ಪ್ರಾಂಶುಪಾಲ ರವಿ ಆರ್. ಮಾತನಾಡಿ, 10ನೇ ತರಗತಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ನೀಡುವ ಪ್ರಮುಖ ಹಂತವಾಗಿದೆ. ಪರೀಕ್ಷಾ ಸಿದ್ಧತೆ ಹಾಗೂ ಮುಂದಿನ ಶಿಕ್ಷಣ ಮತ್ತು ವೃತ್ತಿ ಆಯ್ಕೆಯ ಕುರಿತು ವಿದ್ಯಾರ್ಥಿಗಳಲ್ಲಿರುವ ಗೊಂದಲಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಹಾಗೂ ವೃತ್ತಿ ಆಯ್ಕೆಗೆ ಸಂಬಂಧಿಸಿದ ಸಂದೇಹಗಳನ್ನು ಮುಕ್ತವಾಗಿ ಕೇಳಿ ಮಾರ್ಗದರ್ಶನ ಪಡೆದುಕೊಳ್ಳಬೇಕು. ಮಕ್ಕಳ ಆಸಕ್ತಿ, ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಶಿಕ್ಷಣ ಮತ್ತು ವೃತ್ತಿ ಆಯ್ಕೆ ಮಾಡಲು ಸಹಕರಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ವೃತ್ತಿ ಆಯ್ಕೆ ಹಾಗೂ ಮುಂದಿನ ಶಿಕ್ಷಣದ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಲಾಯಿತು.


ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮಾನಾಥ್ ಪ್ರಭು, ಮುಖ್ಯ ತಂತ್ರಜ್ಞಾನ ಅಧಿಕಾರಿ ಮಂಜುನಾಥ್ ನಾಯ್ಕ್, ಮುಖ್ಯ ಶಿಕ್ಷಕ ವಿನೋದ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ನಂದಿನಿ ಸಿ., ಮಂಡಳಿ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.