ಮಧುಗಿರಿ: ನಿರಂತರ ಸಮತೋಲನದ ಹಾಗೂ ಪೌಷ್ಟಿಕ ಆಹಾರ ಸೇವನೆಯೇ ಆರೋಗ್ಯಕರ ಜೀವನಕ್ಕೆ ಜೀವಶಕ್ತಿಯ ಆಧಾರ ಎಂದು ಆಹಾರತಜ್ಞೆ ಮುಕ್ತ ಜಿ.ಎ. ತಿಳಿಸಿದರು.
ಪಟ್ಟಣದ ಶ್ರೀ ಟಿ.ವಿ.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರಿನ ಶಿರಾ ಗೇಟ್ನ ಗಂಗಾ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ‘ಪೌಷ್ಟಿಕ ಹೆಜ್ಜೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಆರೋಗ್ಯಕರ ಆಹಾರ ಪದ್ಧತಿ ಮತ್ತು ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸಿದರು.
ಮಾದಕ ವಸ್ತುಗಳ ಸೇವನೆ ಹಾಗೂ ಧೂಮಪಾನದಿಂದ ದೂರವಿರಬೇಕು. ಜನಪ್ರಿಯ ವ್ಯಕ್ತಿಗಳ ಜೀವನಶೈಲಿಯನ್ನು ಅಂಧವಾಗಿ ಅನುಕರಿಸದೆ, ಪ್ರತಿಯೊಬ್ಬರ ದೇಹಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ನೇತೃತ್ವವನ್ನು ಗಂಗಾ ಆಸ್ಪತ್ರೆಯ ಡಾ. ವಿಜಯ್ ಆರ್. ವಹಿಸಿದ್ದರು. ಕೆ. ಮಲ್ಲಿಕಾರ್ಜುನ್, ಸುಜಾತ ಬಿ. ಹಾಗೂ ದಯಾನಂದ ಮಾನೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ವೈ. ಹೊಸಮನಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಶಿಸ್ತು, ಸಂಯಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ದಿಕ್ಸೂಚಿಯಾಗುತ್ತವೆ ಎಂದರು.
ಸಾಹಿತಿ ಮ.ಲ.ನ. ಮೂರ್ತಿ ಮಾತನಾಡಿ, “ಆರೋಗ್ಯವೇ ಸಕಲ ಸಂಪತ್ತಿನ ಸೌಭಾಗ್ಯ. ಅದನ್ನು ಕಾಪಾಡಿಕೊಳ್ಳಲು ಸದಾ ಎಚ್ಚರಿಕೆಯಿಂದ ಶ್ರಮಿಸಬೇಕು. ಆಹಾರವೇ ಔಷಧವಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ತೋಹಿದಾಬಾನು, ವಿದ್ಯಾಶ್ರೀ, ಹಸೀನಾ, ವಿಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.