ಭಾರತ ಟೆನ್ನಿಸ್ U12 ತಂಡದಲ್ಲಿ ತಾಲೂಕಿನ ಪೋರ ಆಟ

ಭಾರತ ಟೆನ್ನಿಸ್ U12 ತಂಡದಲ್ಲಿ ತಾಲೂಕಿನ ಪೋರ ಆಟ

ಮಧುಗಿರಿ - ಏಪ್ರಿಲ್ 13 ರಿಂದ 17 ರವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ITF ಏಷ್ಯಾ 12 ಮತ್ತು ಅಂಡರ್ ಟೀಮ್ ಸ್ಪರ್ಧೆ-ದಕ್ಷಿಣ ಏಷ್ಯಾ ಟೆನ್ನಿಸ್ ಟೂರ್ನಮೆಂಟ್ ನ ಅರ್ಹತಾ ಪಂದ್ಯಾವಳಿಯಲ್ಲಿ ಭಾರತದ ಬಾಲಕರ ತಂಡದಲ್ಲಿ ತಾಲೂಕಿನ ಸಂಕಾಪುರ ಗ್ರಾಮದ ಪೋರ ಧನುಷ್ ಎಸ್.ಎಂ ಆಡಲಿದ್ದಾನೆ.  

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಸಂಕಾಪುರ ಎಂಬ ಪುಟ್ಟ ಗ್ರಾಮ ಮೂಲದ ಸರಳ ಕುಟುಂಬದಿಂದ ಬಂದಿರುವ ಮಂಜುನಾಥ ಮತ್ತು ಅವರ ಪತ್ನಿ ಕವಿತಾ ಅವರ ಪುತ್ರ ಕರ್ನಾಟಕದ ಯುವ ಟೆನ್ನಿಸ್ ಆಟಗಾರ ಧನುಷ್ ಎಸ್.ಎಂ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ಇದು ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ. 

ಧನುಷ್ ಕೇವಲ ಎಂಟು ವರ್ಷದವನಾಗಿದ್ದಾಗಲೇ ಗ್ರ್ಯಾಂಡ್ ಸ್ಲಾಂ ಗೆಲ್ಲಬೇಕು ಎಂಬ ಕನಸು ಕಂಡಿದ್ದು,  ಆ ಕನಸು ಈಗ ನಿಧಾನವಾಗಿ ನನಸಾಗುವ ದಾರಿಯಲ್ಲಿದೆ ಎಂದು ಅವರ ತಂದೆ ಮಂಜುನಾಥ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಧನುಷ್ ಅನೇಕ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್‌ಗಳನ್ನು ಗೆದ್ದಿದ್ದು, ಇತ್ತೀಚೆಗೆ ನಡೆದ ಮುಂಬೈ ನ್ಯಾಷನಲ್ಸ್ ಡಬಲ್ಸ್ ಪ್ರಶಸ್ತಿ ಗೆದ್ದು ದೇಶದ ಅತ್ಯುತ್ತಮ ಯುವ ಟೆನ್ನಿಸ್ ಆಟಗಾರರಲ್ಲಿ ಒಬ್ಬನಾಗಿ ಹೊರಹೊಮ್ಮಿದ್ದಾನೆ. ಆತ ತನ್ನ ಫೇರ್ ಪ್ಲೇ ಹಾಗೂ ಆಕ್ರಮಣಕಾರಿ ಆಟದ ಶೈಲಿಯಿಂದ ಕೂಡ ಬಹಳ ಗೌರವವನ್ನು ಗಳಿಸಿದ್ದಾನೆ. ನಾಲ್ಕು ವರ್ಷದ ವಯಸ್ಸಿನಲ್ಲಿ ಬೆಂಗಳೂರಿನ ಸೋಲ್ ಸ್ಪೋರ್ಟ್ಸ್ ಟೆನ್ನಿಸ್ ಅಕಾಡೆಮಿ ಕೋಚ್ ಸೂರಜ್ ಬಿಕ್ಕಣ್ಣ  ಅವರ ಮಾರ್ಗದರ್ಶನದಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದ್ದನು. 

ಬಾಲ್ಯದಲ್ಲೇ ಆಟದ ಬಗ್ಗೆ ಅಪಾರ ಆಸಕ್ತಿ, ಶಿಸ್ತಿನ ಮನೋಭಾವ ಮತ್ತು ದೃಢಸಂಕಲ್ಪವನ್ನು ಹೊಂದಿದ್ದು,  ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಶಿಸ್ತು, ಶ್ರದ್ದೆ ಮತ್ತು ಸಂಕಲ್ಪವೂ ಇರುವ ಆಟಗಾರರನ್ನು ನೋಡೋದು ಅಪರೂಪ ಎಂದು ಕೋಚ್ ಸೂರಜ್ ಬಿಕ್ಕಣ್ಣ ಹೇಳಿದ್ದಾರೆ.