ಮಧುಗಿರಿ: ಯುವಕರು ಕ್ಷಣಿಕ ಸುಖ ಹಾಗೂ ಆಕರ್ಷಣೆಗೆ ಒಳಗಾಗಿ ಮಾದಕ ವ್ಯಸನ ಸೇರಿದಂತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣ, ಶಿಸ್ತು ಹಾಗೂ ಮೌಲ್ಯಯುತ ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಅಬಕಾರಿ ಉಪ ಅಧೀಕ್ಷಕ ಎಸ್. ದೀಪಕ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಬಕಾರಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮನಸ್ಥಿತಿ, ಕುಟುಂಬದ ಪರಿಸ್ಥಿತಿ ಹಾಗೂ ಜೀವನದ ಗುರಿಯ ಬಗ್ಗೆ ಸ್ಪಷ್ಟ ಅರಿವು ಹೊಂದಿರಬೇಕು. ಕ್ಷಣಿಕ ಆಕರ್ಷಣೆಗಳಿಗೆ ಮಣಿಯದೆ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು. ದುಶ್ಚಟಗಳು ವ್ಯಕ್ತಿಯ ಭವಿಷ್ಯವನ್ನಷ್ಟೇ ಅಲ್ಲದೆ ಕುಟುಂಬದ ನೆಮ್ಮದಿಯನ್ನೂ ಹಾಳುಮಾಡುತ್ತವೆ ಎಂದು ಹೇಳಿದರು.
ಮಾದಕ ವಸ್ತುಗಳ ಸೇವನೆ, ಸಾಗಾಟ, ಸಂಗ್ರಹಣೆ, ಉತ್ಪಾದನೆ ಹಾಗೂ ಇತರರನ್ನು ಬಳಕೆಗೆ ಪ್ರೇರೇಪಿಸುವುದು ಕಾನೂನುಬದ್ಧ ಅಪರಾಧವಾಗಿದೆ. ಆದ್ದರಿಂದ ಅಪರಿಚಿತರಿಂದ ಯಾವುದೇ ವಸ್ತುಗಳನ್ನು ಸ್ವೀಕರಿಸುವಾಗ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆ ಹಾಗೂ ದಂಡದ ವಿಧಿಗಳಿವೆ ಎಂದು ತಿಳಿಸಿದರು.
ಅಬಕಾರಿ ನಿರೀಕ್ಷಕ ಸತೀಶ್ ಮಾತನಾಡಿ, ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ಪ್ರಮುಖ ಘಟ್ಟವಾಗಿದೆ. ಉತ್ತಮ ಸ್ನೇಹ, ಶಿಸ್ತು ಹಾಗೂ ಪರಿಶ್ರಮದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಸಮಾಜದ ಜವಾಬ್ದಾರಿಯುತ ನಾಗರಿಕರಾಗಬೇಕು. ಕೆಟ್ಟ ಸಹವಾಸಕ್ಕೆ ಒಳಗಾಗದೆ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೇದಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸಮಯ, ಶ್ರಮ ಹಾಗೂ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಬಕಾರಿ ನಿರೀಕ್ಷಕರಾದ ಲಂಕೇ ಹನುಮಯ್ಯ, ಉಪನಿರೀಕ್ಷಕ ಲೋಕೇಶ್, ಮಧುಗಿರಿ ವಲಯದ ಅಬಕಾರಿ ನಿರೀಕ್ಷಕಿ ಶ್ರೀಲತಾ, ಅಬಕಾರಿ ಉಪನಿರೀಕ್ಷಕ ಮನು ಹಾಗೂ ಸಿಬ್ಬಂದಿಗಳಾದ ನಾಗೇಶ್ ಬಾಬು, ಜಗದೀಶ್ ಮತ್ತು ತೋಸಿಬ್ ಖಾನ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.