Live Sunday, October 25, 2026
Font Size:
ಸುದ್ದಿ 1 min read 36 Views
Okt 02, 2026

ವನ್ಯಜೀವಿ ಸಂರಕ್ಷಣೆಯ ಮಹತ್ವ ಸಾರಿದ ಅರಣ್ಯ ಇಲಾಖೆ

ವನ್ಯಜೀವಿ ಸಂರಕ್ಷಣೆಯ ಮಹತ್ವ ಸಾರಿದ ಅರಣ್ಯ ಇಲಾಖೆ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಹನುಮನಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಪ್ತಾಹದ ಕುರಿತು ಜಾಗೃತಿ

ಮಧುಗಿರಿ: ತಾಲೂಕಿನ ತಿಮ್ಮಲಾಪುರ ಅರಣ್ಯ ಪ್ರದೇಶ ವ್ಯಾಪ್ತಿಯ ಕವಣದಾಲ ಸಮೀಪದ ಶ್ರೀ ಉಜ್ಜಯಿನಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಪ್ತಾಹ–2026ರ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಹನುಮನಹಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಕ್ಟೋಬರ್ 2ರಿಂದ 8ರವರೆಗೆ ನಡೆಯುವ ವನ್ಯಜೀವಿ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ, ಅರಣ್ಯದ ಮಹತ್ವ ಹಾಗೂ ಪರಿಸರ ಸಮತೋಲನದ ಕುರಿತು ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವನ್ಯಜೀವಿ ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಸಿ.ಎಫ್. ಉಮಾ, “ಆವಾಸಸ್ಥಾನಗಳ ಜೋಡಣೆ—ವನ್ಯಜೀವಿಗಳ ಬದುಕು ಉಳಿಯಲಿ” ಎಂಬ ಸಂದೇಶದೊಂದಿಗೆ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿಸುವುದು, ಅರಣ್ಯ ಹಾಗೂ ವನ್ಯಜೀವಿಗಳೊಂದಿಗೆ ಜನರ ಬಾಂಧವ್ಯವನ್ನು ಬಲಪಡಿಸುವುದು ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಸಪ್ತಾಹದ ಪ್ರಮುಖ ಉದ್ದೇಶವಾಗಿದೆ ಎಂದರು.

ವನ್ಯಜೀವಿಗಳ ಸಂರಕ್ಷಣೆ ಸಮಾಜದ ಆದ್ಯ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ಸುರೇಶ್ ಮಾತನಾಡಿ, ವನ್ಯಜೀವಿಗಳು ಅರಣ್ಯದ ಆಭರಣದಂತೆ. ಪರಿಸರ ಸಮತೋಲನ ಕಾಪಾಡುವಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ವನ್ಯಜೀವಿ ಸಪ್ತಾಹದ ಮುಖ್ಯ ಉದ್ದೇಶ ಪ್ರಾಣಿಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ವನ್ಯಜೀವಿಗಳೊಂದಿಗೆ ಅವುಗಳ ಆವಾಸಸ್ಥಾನವಾಗಿರುವ ಅರಣ್ಯಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಅರಣ್ಯ ಸಂರಕ್ಷಣೆ ಹಾಗೂ ನೈಸರ್ಗಿಕ ಸಮತೋಲನದ ಅಗತ್ಯವನ್ನು ವಿದ್ಯಾರ್ಥಿಗಳು ಅರಿತುಕೊಂಡು, ತಮ್ಮ ತಂದೆ-ತಾಯಿ ಹಾಗೂ ಸಾರ್ವಜನಿಕರಿಗೂ ಇದರ ಮಹತ್ವವನ್ನು ತಿಳಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಆರ್.ಎಫ್. ಶಾಲಿನಿ, ಸುಮನ್, ಅರಣ್ಯ ರಕ್ಷಕರಾದ ಚಿದಾನಂದ, ಯಲ್ಲಪ್ಪ, ಸಿದ್ದರಾಜು, ಪರಶುರಾಮ್, ಹರೀಶ್, ಬಾಬು, ಮಹೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.